ಗೃಹಬಂಧನದಲ್ಲಿದ್ದಾಗ ಓದಿದ 10 ಕನ್ನಡ ಪುಸ್ತಕಗಳ ಕಿರು ವಿಮರ್ಶೆ
1. ಕೌಶಿಕ್ ಕೂಡುರಸ್ತೆ ಬರೆದ ಕಾಲಾಯ ತಸ್ಮೈ ನಮಃ
ಅರ್ಧ ಪತ್ತೇದಾರಿ, ಅರ್ಧ ವಾಮಾಚಾರ/ಪರಕಾಯ ನಿಯಂತ್ರಣ ಸಂಬಂಧಿ ಕತೆ. ತನ್ನ ಕೃತಿ ಚೌರ್ಯವಾಯಿತು ಎಂದು ಪೊಲೀಸ್ ಠಾಣೆಗೆ ಹೋಗಿ ಇಬ್ಬರು ದೂರು ಕೊಡುವುದರಿಂದ ಪ್ರಾರಂಭವಾಗುವ ಕತೆ ನೀಲಿ ಕಣ್ಣಿನ ಯುವತಿಯರ ನಿಗೂಢ ಸಾವಿನ ಸುತ್ತ ಬೆಳೆಯುತ್ತಾ ಹೋಗುತ್ತದೆ. ಕೆಲವು ವಿಷಯಗಳು (ಒಬ್ಬರು ಮಾಡಿದಂತೆ ಇನ್ನೊಬ್ಬರು ಆಡುವುದು) ನಂಬಲು ಕಷ್ಟವಾದರೂ ಸಾಕಷ್ಟು ಕುತೂಹಲ ಉಳಿಸಿಕೊಂಡು ತಾರ್ಕಿಕ ಅಂತ್ಯ ತಲುಪುತ್ತದೆ.
2. ಕೌಶಿಕ್ ಕೂಡುರಸ್ತೆ ಬರೆದ ಆತ್ಮೀಯ
ಪ್ರೀತಿ ಪ್ರೇಮದ ಕತೆ.ಮೊದಲ ಅರ್ಧ ಹುಡುಗಿಯ ಪ್ರಕಾರ, ಕೊನೆಯ ಭಾಗ ಹುಡುಗನ ನೋಟದಲ್ಲಿ ಪ್ರಸ್ತುತಪಡಿಸಲಾಗಿದೆ. ಪ್ರೇಮಕತೆಗಳನ್ನು ಇಷ್ಟಪಡುವವರು ಅರ್ಧ ದಿನದಲ್ಲಿ ಓದಿ ಮುಗಿಸಬಹುದಾಗಿದೆ.
3. ಅಲ್ತಾರು ರಾಮ ಮೊಗೇರ ಬರೆದ ಸ್ವಾರ್ಥ ಸಂಧಾನ
3. ಅಲ್ತಾರು ರಾಮ ಮೊಗೇರ ಬರೆದ ಸ್ವಾರ್ಥ ಸಂಧಾನ
ಕುಂದಾಪುರ ಕನ್ನಡ ಭಾಷೆಯಲ್ಲಿ ಬರೆದ ಬಹಳ ದಪ್ಪದ ಪುಸ್ತಕ. ಸ್ವಾತಂತ್ರ್ಯ ಹೋರಾಟದ ಸಮಯದ ಕತೆ. ಊರ ಗೌಡರ ಮನೆಯಲ್ಲಿ ನಡೆಯುವ ಘಟನೆಗಳು, ಗಾಂಧೀಜಿಯ ಭೇಟಿ, ಮತ್ತಿತರ ವಿಷಯಗಳ ಸುತ್ತ ಹೆಣೆಯಲಾಗಿದೆ. ಸ್ವಲ್ಪ ದೀರ್ಘವೆನಿಸುತ್ತದೆ. ಪುರುಸೊತ್ತಿದ್ದಾರೆ ನಿಧಾನವಾಗಿ ಓದಬಹುದು. ಕುಂದಾಪುರ ಕನ್ನಡ ಭಾಷೆಯಲ್ಲಿ ಇರುವ ಕಾದಂಬರಿಗಳು ಕಡಿಮೆಯಾದುದರಿಂದ ಈ ಪುಸ್ತಕ ಗಮನ ಸೆಳೆಯುತ್ತದೆ. 4. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ - ಗಿರಿಮನೆ ಶ್ಯಾಮರಾವ್
ಅರಣ್ಯದ ಮಧ್ಯ ಆಣೆಕಟ್ಟು ಕಟ್ಟುವ ಯೋಜನೆ, ಅದಕ್ಕೆ ಪರಿಸರವಾದಿಗಳ ವಿರೋಧ, ಹೊಲ, ಮನೆ ಕಳೆದುಕೊಳ್ಳಲಿರುವ ಹಳ್ಳಿಗರ ಅನುಭವ ಇತ್ಯಾದಿಗಳನ್ನು ಚೆನ್ನಾಗಿ ಕಟ್ಟಿ ಕೊಡಲಾಗಿದೆ. ಸ್ವಂತ ಲಾಭಕ್ಕಾಗಿ ಇತರರನ್ನು ನಂಬಿಸುವ, ಬಳಸಿಕೊಳ್ಳುವ ಜನರು, ಸರಕಾರೀ ಯೋಜನೆಯ ಅದ್ವಾನಗಳು, ಅಮಾಯಕರ ಅಸಹಾಯಕತೆ ಇತ್ಯಾದಿ ಸಹಜವಾಗಿ ಮೂಡಿಬಂದಿದೆ.
5. ಹುಡುಗಾಟ - ಹುಡುಕಾಟ- ಗಿರಿಮನೆ ಶ್ಯಾಮರಾವ್
ತರಂಗ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿಬಂದ ವಿಷಯವನ್ನು ಕಾದಂಬರಿಯಾಗಿ ಪ್ರಕಟಿಸಲಾಗಿದೆ. ಬೆಂಗಳೂರಿನಿಂದ ಸಕಲೇಶಪುರಕ್ಕೆ ರಜೆಗೆ ಬಂಡ ಮಕ್ಕಳು ಕಾಡಿನಲ್ಲಿ ಎಲ್ಲೋ ಹೋಗಲು ಹೋಗಿ ದಾರಿ ತಪ್ಪಿ ಎರಡು ಮೂರು ದಿನ ಪರದಾಡುವುದನ್ನು ವಿವರವಾಗಿ ಚಿತ್ರಿಸಲಾಗಿದೆ. ಕಾಡಿನಲ್ಲಿ ಎದುರಾಗಬಹುದಾದ ಎಲ್ಲಾ ಅಪಾಯಗಳು ಮೂರೇ ಮೂರು ದಿನದಲ್ಲಿ ಒಂದಾದ ಮೇಲೆ ಇನ್ನೊಂದರಂತೆ ಕಾಣಿಸಿಕೊಳ್ಳುವುದು ಸ್ವಲ್ಪ ಅಸಹಜವಾದರೂ ಕತೆ ಚೆನ್ನಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಬದುಕುವುದು ಹೇಗೆ, ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಸ್ವಲ್ಪ ತಿಳಿದುಕೊಳ್ಳಬಹುದು.
6. ಕುರುಡ ಕುರುಡಿ- ಶಾಂತಾರಾಮ ಸೋಮಯಾಜಿ
ಮುನ್ನೂರು ಪುಟಗಳ ಕಾದಂಬರಿ. ಕೆಲವು ಅಧ್ಯಾಯಗಳು ಸಣ್ಣ ಕತೆಗಳಂತಿವೆ.. ಆಶ್ರಮದ ಕುತಂತ್ರಗಳು, ವೆಂಕಟಾಚಲಪತಿಯ ರಾಜಕೀಯ ಇತ್ಯಾದಿ ಚೆನ್ನಾಗಿವೆ, ರಾನ್ ಗೆ ಸಂಬಂಧಿಸಿದ ಅಧ್ಯಾಯಗಳು ಸ್ವಲ್ಪ ಬೋರ್ ಅನ್ನಿಸಿತು.
.
7. ಅಕ್ಕ - ಪಿ ಲಂಕೇಶ್
ಹದಿನೈದು ವರ್ಷ ಹಳೆಯ ಪುಸ್ತಕ. ಮೊದಲ ಐದು ಹತ್ತು ಪುಟ ಓದಿದೆ, ಅಷ್ಟೇನೂ ಆಸಕ್ತಿ ಕೆರಳಿಸಲಿಲ್ಲ, ಅಲ್ಲಿಗೆ ಬಿಟ್ಟೆ.
8. ನಿರಾಕರಣ : ಎಸ್ ಎಲ್ ಭೈರಪ್ಪ
ಮೊದಲೊಮ್ಮೆ ಓದಿದ್ದೆ ಎಂದು ನೆನಪು, ಕತೆ ಮರೆತು ಹೋಗಿತ್ತು. ಇನ್ನೊಮ್ಮೆ ಓದಿದೆ. ಹಲವು ಮಕ್ಕಳ ತಂದೆ ಪತ್ನಿಯ ಮರಣದ ನಂತರ ಸಾಕಲಾಗದೇ ಮಕ್ಕಳನ್ನು ದತ್ತು ಕೊಡುವ, ಕೊಟ್ಟ ನಂತರದ ಜೀವನದ ಕತೆ. ಯಾವುದೇ ಅಡೆ ತಡೆ ಇಲ್ಲದೆ ಓದಿಸಿಕೊಂಡು ಹೋಗುತ್ತದೆ. ನೈಜತೆ ಮತ್ತು ಮನಸಿನ ಗೊಂದಲಗಳ ಸಹಜ ಚಿತ್ರಣದಿಂದಾಗಿ ಪ್ರಿಯವಾಗುತ್ತದೆ.
9. ಉಡುಪಿ ಜಿಲ್ಲೆಯ ಶತಮಾನದ ಕತೆಗಳು
ಬಹಳ ಇಷ್ಟವಾಯಿತು. ಶಿವರಾಮ ಕಾರಂತರದ್ದೂ ಸೇರಿದಂತೆ ಉಡುಪಿ ಜಿಲ್ಲೆಯ ಹಲವು ಬರಹಗಾರರ ಆಯ್ದ ಕತೆಗಳಿವೆ. ಹೆಚ್ಚಿನವು ಚೆನ್ನಾಗಿವೆ.
10. ಅನಿಶ್ಚಯ - ಎ ಪಿ ಮಾಲತಿ
ಸದಾಶಿವ ಎಂಬ ವ್ಯಕ್ತಿಯ ಕತೆ. ಓದಿ ಕೆಲಸ ಸಿಗದೇ ಪರದಾಡುವ, ನಂತರ ವಿವಿಧ ವೃತ್ತಿ ಮಾಡಿ ಮೇಲೆ ಬರುವ ಜೀವನ ಗಾಥೆ. ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಬೇಸಾಯ ಮಾಡುವವರ ಹಲವು ಕಷ್ಟಗಳು, ದಾಯಾದಿ ಮತ್ಸರ, ಕಚೇರಿಯಲ್ಲಿ ಮೋಸ ಇತ್ಯಾದಿ ಹಲವು ಆಯಾಮಗಳಿವೆ.
ವಿ. ಸೂ: ಕೆಲವು ಪುಸ್ತಕಗಳಿಗೆ ಅಮ್ಮ ಚೆನ್ನಾಗಿ ಬೈಂಡ್ ಮಾಡಿ ಇಟ್ಟಿದ್ದರಿಂದ ಮುಖಪುಟ ಚಿತ್ರ ತೆಗೆದಿಲ್ಲ
ನನ್ನ ಮೊದಲ ಕನ್ನಡ ಪುಸ್ತಕ-ವಿಶ್ವ ದರ್ಶನ ಬಜೆಟ್ನಲ್ಲಿ * ಟೆಕ್ ಬುಕ್ (ಶ್ರೀನಿಧಿ ಟಿ ಜಿ ) * ಮಾಯಾ ಬಜಾರಿ ಕನ್ನಡ ಕವಿತೆ * ಕನ್ನಡ- ಇಂಗ್ಲಿಷ್ ಭಾಷಾಂತರ ಸೇವೆ
ಧನ್ಯವಾದಗಳು ಓದಿ ಅಭಿಪ್ರಾಯ ತಿಳಿಸಿದ್ದಕ್ಕೆ❤️🙌
ReplyDelete