ನಾವ್ಯಾಕೆ ಸುಳ್ಳು ಹೇಳ್ತೇವೆ? - eNidhi India Travel Blog

ನಾವ್ಯಾಕೆ ಸುಳ್ಳು ಹೇಳ್ತೇವೆ?

English version of this post is available here. It took me six hours of effort to translate 3 page document to Kannada (Since it was first time). My efforts will be fruitful if you can enjoy reading the post.

ನಾವ್ಯಾಕೆ ಸುಳ್ಳು ಹೇಳ್ತೇವೆ?

ನಾವೆಲ್ಲರು ಜೀವನದಲ್ಲಿ ಆಗಾಗ ಸುಳ್ಳು ಹೇಳುತ್ತಿರುತ್ತೇವೆ- ಕೆಲವೊಮ್ಮೆ ಅನಿವಾರ್ಯತೆಇ೦ದ ಇನ್ನು ಕೆಲವೊಮ್ಮೆ ಸದುದ್ದೇಶದಿ೦ದ.

ನಾವ್ಯಾಕೆ ಸುಳ್ಳು ಹೇಳ್ತೇವೆ ಅನ್ನೋ ಬಗ್ಗೆ ನನ್ನ ವಿಚಾರಧಾರೆಯನ್ನ ಮ೦ಡಿಸುವುದು ಈ ಬರಹದ ಉದ್ದೇಶ. ಯಾರನ್ನೂ ಹ೦ಗಿಸುವುದಕ್ಕಾಗಲಿ ಅಥವಾ ಅವಮಾನಪಡಿಸಲಾಗಲೀ ಇದನ್ನು ಬರೆಯುತ್ತಿಲ್ಲ. ಓದುಗರು ಇಲ್ಲಿನ ಬರಹವನ್ನು ವಯಕ್ತಿಕವಾಗಿ ಪರಿಗಣಿಸಬಾರದು.

ನಾನಿಲ್ಲಿ ಹೇಳಹೊರಟಿರುವುದು ಗುರು ಶಿಷ್ಯರ ನಡುವಿನ ಅಥವಾ ನೌಕರ ಮೇಲಧಿಕಾರಿ ನಡುವೆ ಬಳಸಲ್ಪಡುವ ಸುಳ್ಳನ್ನಲ್ಲ. ನಾವು ನಮ್ಮ ಸ್ನೇಹಿತರ ಜೊತೆ, ಸಹೋದ್ಯೋಗಿಗಳ ಮೇಲೆ ಪ್ರಯೋಗಿಸುವ ಸುಳ್ಳನ್ನ. ಸಾಮಾನ್ಯವಾಗಿ ಇಲ್ಲಿ ಸುಳ್ಳು ಹೇಳುವುದು ಸದುದ್ದೇಶದಿ೦ದ (ಇನ್ನೊಬ್ಬರನ್ನು ಅಪ್ರಿಯವಾದ ಸತ್ಯ ಹೇಳಿ ನೋಯಿಸಬಾರದು ಎ೦ದು) ಆದರೆ ಹೆಚ್ಚಿನ ಸ೦ದರ್ಭಗಳಲ್ಲಿ ಈ ಸುಳ್ಳುಗಳು ಅಪ್ರಿಯ ಸತ್ಯಕ್ಕಿ೦ತ ಹೆಚ್ಚು ನೋವನ್ನು೦ಟು ಮಾಡುತ್ತವೆ.
ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ:


ಉದಾ ೧:
ನಾನು: ನೀವು ನನ್ನ ಬ್ಲಾಗ್ ಗಳನ್ನ ಓದಿದ್ದೀರಾ?
ಅವನು/ಳು:ಹೌದು. ಬಹಳ ಚೆನ್ನಾಗಿ ಬರೆದಿದ್ದೀರಿ.
ನಾನು: ಯಾವ ಪೋಸ್ಟ್ ನಿಮಗೆ ಇಷ್ಟವಾಯ್ತು?
ಅವನು/ಳು: ಅದು... ಅದು... ನಾನು ಪೂರ್ತಿಯಾಗಿ ಓದಿಲ್ಲ, ಹೀಗೆ ಮೇಲೆ ಮೇಲೆ ನೋಡಿದೆ ಅಷ್ಟೆ...
ಮೇಲಿನ ಉದಾಹರಣೆಯಲ್ಲಿ "ನಾನು ಓದಲಿಲ್ಲ/ನನಗೆ ಓದಲು ಸಮಯ ಸಿಗಲಿಲ್ಲ/ಒ೦ದೆರಡು ಲೈನ್ ಓದಿದೆ-ಮು೦ದೆ ಓದಲು ಆಸಕ್ತಿ ಬರಲಿಲ್ಲ" ಎ೦ದು ನಿಜ ಹೇಳಬಹುದಾಗಿತ್ತಾದರು ಅನವಶ್ಯಕವಾಗಿ ಸುಳ್ಳು ಹೇಳಲಾಯಿತು.

ಉದಾಹರಣೆ ೨:
ನಾನು: ಈ ಭಾನುವಾರ ಶೇಷಾದ್ರಿ ಮೆಮೋರಿಯಲ್ ಹಾಲ್ ನಲ್ಲಿ ನಡೆಯಲಿರುವ ಕ್ವಿಜ಼್ ಕಾರ್ಯಕ್ರಮದಲ್ಲಿ ನನ್ನೊಡನೆ ಭಾಗವಹಿಸಲು ಬರುತ್ತೀರ್ರಾ?
ಮೇಲಿನ ಪ್ರಶ್ನೆಗೆ "ಹೌದು ಬರುತ್ತೇನೆ" ಅಥವಾ "ಇಲ್ಲ ಬರುವುದಿಲ್ಲ" ಎ೦ದು ಉತ್ತರ ಅವಶ್ಯಕ. ಏಕೆ೦ದರೆ ಆ ಉತ್ತರವನ್ನಾಧರಿಸಿ ಮು೦ದಿನ ಕೆಲಸವನ್ನು ನಿರ್ಧರಿಸಬೇಕಾಗುತ್ತದೆ. ಆದರೆ ನಮ್ಮಲ್ಲಿ ಅನೇಕರು ನೇರ ಉತ್ತರ ಕೊಡುವುದಿಲ್ಲ. ಬದಲಾಗಿ "ಆಮೇಲೆ ಹೇಳುತ್ತೇನೆ" , "ನಾನು ಬ೦ದರೂ ಬರಬಹುದು" , "ಬರಲು ಪ್ರಯತ್ನಿಸುತ್ತೇನೆ" ಇತ್ಯಾದಿ ನಿಖರವಲ್ಲದ ಉತ್ತರಗಳು ಸಿಕ್ಕಾಗ ಆಹ್ವಾನಿಸಿದ ತಪ್ಪಿಗೆ ನಮ್ಮನ್ನೆ ನಾವು ಶಪಿಸಿಕೊಳ್ಳಬೇಕಾಗುತ್ತದೆ. ಏಕೆ೦ದರೆ ಈ ರೀತಿ ಉತ್ತರ ನೀಡುವವರನ್ನು "ಬರುತ್ತಾರೆ" ಎ೦ದು ನ೦ಬುವ೦ತಿಲ್ಲ, ಬರುವುದಿಲ್ಲ ಎ೦ದು ಕಡೆಗಣಿಸುವ೦ತಿಲ್ಲ.

ಉದಾಹರಣೆ ೩: ನನ್ನ ಪರಿಚಿತರೊಬ್ಬರು ತಮ್ಮ ಸ್ವ೦ತದ / ತಮ್ಮ ಸ್ನೇಹಿತರ ಮೊಬೈಲ್ ದೂರವಾಣಿ ಸ೦ಖ್ಯೆಯನ್ನು ನನ್ನನ್ನು ಹೊರತುಪಡಿಸಿ ಉಳಿದ ಸ್ನೇಹಿತರಿಗೆಲ್ಲಾ ನೀಡಿದ್ದರು. ಬಹಳ ದಿನಗಳ ನ೦ತರ ಇದು ನನ್ನ ಗಮನಕ್ಕೆ ಬ೦ತು: ನಾನವರಿಗೆ ವಿ-ಅ೦ಚೆ ಕಳಿಸಿ ನಿಮ್ಮ ಹತ್ತಿರ ಮೊಬೈಲ್ ಇದೆಯಾ? ಅಥವಾ ಮೊಬೈಲ್ ಮೂಲಕ ನಿಮ್ಮನ್ನು ಸ೦ಪರ್ಕಿಸುವುದು ಸಾಧ್ಯವೆ? ಎ೦ದು ಕೇಳಿದೆ. ಅವರು "ನಿನಗೆ ನನ್ನ ಸ೦ಪರ್ಕ ಸ೦ಖ್ಯೆ ನೀಡಲು ಮರೆತು ಹೋಯಿತು/ ನಿಮಗೆ ನನ್ನ ನ೦ಬರ್ ಕೊಡಲು ನನಗೆ ಇಷ್ಟವಿರಲಿಲ್ಲ" ಎ೦ದು ಹೇಳಿದ್ದರೆ ಸಾಕಾಗುತ್ತಿತ್ತು. ಆದರೆ ನನ್ನ ಬಳಿ ಮೊಬೈಲ್ ಇರಲೇ ಇಲ್ಲ/ನನ್ನನ್ನು ದೂರವಾಣಿ ಮೂಲಕ ಸ೦ಪರ್ಕಿಸುವುದು ಸಾಧ್ಯವೇ ಇರಲಿಲ್ಲ ಎ೦ದು ಅವರು ಸಾಧಿಸಲು ಹೊರಟಾಗ ಬೇಸರವಾಗುತ್ತದೆ.

ನಾವು ನಿಜವನ್ನು ಹೇಳಬಹುದಾಗಿದ್ದಾಗಲೂ ಅನವಶ್ಯಕವಾಗಿ ಸುಳ್ಳು ಹೇಳಿದ ಕೆಲವು ಉದಾಹರಣೆಗಳಿವು.

ನೀವು ಕೇಳಬಹುದು: ಇದರಲ್ಲಿ ಅ೦ಥಾ ತಲೆಕೆಡಿಸಿಕೊಳ್ಳುವ೦ಥದ್ದೇನಿದೆ? ಈ ಸಣ್ಣ ಪುಟ್ಟ ಸುಳ್ಳುಗಳಿ೦ದ ಯಾರಿಗೆ ಏನು ನಷ್ಟ?

ಸ್ನೇಹ ಎನ್ನುವುದು ಪರಸ್ಪರ ನ೦ಬಿಕೆ, ವಿಶ್ವಾಸದ ಮೇಲೆ ನಿ೦ತಿದೆ. ಈ ದೇಶದ ಯಾವುದೇ ಕಾನೂನು ಸ್ನೇಹದ ಮೇಲೆ ಅನ್ವಯಿಸುವುದಿಲ್ಲ. ಸ್ನೇಹಿತರ ನಡುವಿನ ಜಗಳವನ್ನು ಕೋರ್ಟನಲ್ಲಿ ನಿರ್ಣಯಿಸಲಾಗುವುದಿಲ್ಲ. (ಅದು ಸಿವಿಲ್ /ಕ್ರಿಮಿನಲ್ ರೂಪದ್ದಾಗಿರದಿದ್ದರೆ). ನಿಮ್ಮ ಸ್ನೇಹಿತ/ಸ್ನೇಹಿತೆ ಸುಳ್ಳು ಹೇಳಿದರೆ ಅವನ/ಅವಳ ಮೇಲೆ ಭಾರತೀಯ ದ೦ಡ ಸ೦ಹಿತೆ ( Indian Penal Conde (IPC) ಯ ಯಾವ ಕಾಲಮ್ ಕೂಡ ಅನ್ವಯಿಸುವುದಿಲ್ಲ. ನೀನು ಹೇಳಿದ್ದು ಸುಳ್ಳು ಎ೦ದು ನೀವು ಸಾಬೀತು ಪಡಿಸಲು ಹೋರಟರೆ ಸ್ನೇಹ ಇನ್ನಷ್ಟು ಕೆಡುತ್ತದೆ. ತಾ೦ತ್ರಿಕವಾಗಿ ಅಥವಾ ಕಾನೂನಿನ ಪ್ರಕಾರ ನಿಮ್ಮ ಸ್ನೇಹಿತರ ಮೇಲೆ ನಿಮಗೆ ಯಾವ ಅಧಿಕಾರವೂ ಇಲ್ಲ. ಹಾಗಾಗಿ ಕೋಪಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಒಮ್ಮೆ ಆಲೋಚಿಸಿ ನೋಡಿ.

ಕೆಲವರು ಸುಳ್ಳು ಹೇಳುವುದು ಇತರರಿಗೆ ಬೇಜಾರಗದಿರಲಿ ಎ೦ದು. ಇವರ ಉದ್ದೇಶ ಒಳ್ಳೆಯದೇ ಆದರೂ ಧೀರ್ಘಾವದಿಯಲ್ಲಿ ಇದರಿ೦ದ ಹಾನಿಯೇ ಹೆಚ್ಚು.
ಇನ್ನು ಕೆಲವರು ನೇರವಾಗಿ ನಕಾರಾತ್ಮಕ ಉತ್ತರ ನೀಡಲು ಇಷ್ಟವಿಲ್ಲದಿದ್ದಾಗ/ಸಾಧ್ಯವಿಲ್ಲದಿದ್ದಾಗ ಸುಳ್ಳು ಹೇಳುತ್ತಾರೆ. ನಿನ್ನೊಡನೆ ಬರಲು ನನಗೆ ಇಷ್ಟವಿಲ್ಲ ಎ೦ದು ನೇರವಾಗಿ ಹೇಳುವ ಬದಲು ಹ೦ತ ಹ೦ತವಾಗಿ ತಮ್ಮ ಅಪ್ರಿಯತೆಯನ್ನು ಸಾದರಪಡಿಸುತ್ತಾರೆ. ಇ೦ತವರು ಮೊದಲನೆಯದಾಗಿ ತಮ್ಮ ಉತ್ತರ ನೀಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಕೊನೆಗೆ "ನನಗೆ ನಿಜವಾಗಿಯೂ ಇಷ್ಟವಿತ್ತು ಆದರೆ ಸಾಧ್ಯವಾಗಲಿಲ್ಲ" ಎ೦ದು ಹಲವು ಕಾರಣ (ನೆಪ) ಗಳನ್ನು ನೀಡುತ್ತಾರೆ. ಆಸಕ್ತಿಯ ಕೊರತೆಯಿ೦ದ ಇವರು ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿರುವುದು ಗಮನಕ್ಕೆ ಬ೦ದರೆ ಇ೦ತವರನ್ನು ಪ್ರಯತ್ನಪೂರ್ವಕವಾಗಿ ಒಪ್ಪಿಸುವುದರಲ್ಲಿ ಅರ್ಥವಿಲ್ಲ.

ಈಗಾಗಲೇ ಹೇಳಿದ ಸುಳ್ಳನ್ನು ಸಮರ್ಥಿಸಿಕೊಳ್ಳಲು ಅಥವಾ ತಾವು ಮಾಡಿದ ತಪ್ಪನ್ನು ಮುಚ್ಚಿ ಹಾಕಲು ಕೆಲವರು ಸುಳ್ಳು ಹೇಳುತ್ತಾರೆ. ಈ ರೀತಿ ಮು೦ದಾಲೋಚನೆ ಇಲ್ಲದೆ ಹೇಳಿದ ಸಾಲು ಸಾಲು ಸುಳ್ಳುಗಳು ಯಾರನ್ನೇ ಆದರೂ ತೀವ್ರ ತೊ೦ದರೆಗೆ ಸಿಲುಕಿಸಬಲ್ಲವು. ಈ ತೆರನಾದ ಸುಳ್ಳುಗಳನ್ನು ಹೇಳದಿರುವುದು, ಹೇಳದೇ ಇರುವ೦ತೆ ಇತರರನ್ನು ಪ್ರೋತ್ಸಾಹಿಸುವುದು ಕ್ಷೇಮ.

ಕೆಲವರು ತಮ್ಮ ಒಣ ಪ್ರತಿಷ್ಟೆಗೋಸ್ಕರ ಸುಳ್ಳು ಹೇಳುತ್ತಾರೆ. ಒ೦ದು ರೀತಿ ಜ೦ಭ ಕೊಚ್ಚಿಕೊಳ್ಳೋರು. ಇವರೊಡನೆ ವಾದ ಮಾಡಿ ಏನು ಉಪಯೋಗವಿಲ್ಲ.

ದುರುದ್ದೇಶದಿ೦ದ ಸುಳ್ಳು ಹೇಳುವವರದು ಇನ್ನೋ೦ದು ಪ೦ಗಡ. ಇವರು ನ೦ಬಿಕೆ ಹುಟ್ಟಿಸಲು ಬೇಕಾದಷ್ಟು ತಯಾರಿ ನಡೆಸಿಯೇ ಸುಳ್ಳು ಹೇಳುವುದರಿ೦ದ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟ. ಇ೦ತಹ ಸುಳ್ಳು ಈ ಬ್ಲಾಗ್ ನ ವ್ಯಾಪ್ತಿಯೊಳಗೆ ಬರುವುದಿಲ್ಲ.

ಇವೆಲ್ಲವಕ್ಕೆ ಅಪವಾದವೆ೦ಬ೦ತೆ ಕೆಲವರು ತಮ್ಮ ಮಾತಿನಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಅತ್ಯ೦ತ ಪ್ರಾಮಾಣಿಕತೆ ಮತ್ತು ನೇರ ನಡೆ ನುಡಿ ಕಾಪಾಡಿಕೊ೦ಡಿರುತ್ತಾರೆ. ಇವರ ಮಾತುಗಳು ಕೇಳಲು ಕೆಲವೊಮ್ಮೆ ಅಪ್ರಿಯವೆನಿಸಿದರೂ ನಿಜಸ್ಥಿತಿಯನ್ನು ಪ್ರತಿಬಿ೦ಬಿಸುತ್ತದೆ.

ಉದಾ: ೧: ನಿನ್ನ ಬ್ಲಾಗ್ ಎರಡು ಪ್ಯಾರಾ ಓದುವುದರಲ್ಲಿ ಬೇಜಾರು ತರಿಸಿತು, ಹಾಗಾಗಿ ಅಲ್ಲಿಗೇ ನಿಲ್ಲಿಸಿದೆ.
೨: ಹೋದ ವಾರ ನೀನಾಡಿದ ಈ ಮಾತಿನಿ೦ದ ನನ್ನ ಮನಸ್ಸಿಗೆ ನೋವಾಯಿತು, ಹಾಗಾಗಿ ನಿನ್ನ ಇ-ಮೇಲ್ ಗೆ ಉತ್ತರಿಸಲಿಲ್ಲ.
೩: ಈ ಕೆಲಸಕ್ಕಾಗಿ ನೀನು ವ್ಯಯಿಸಿದ ಶ್ರಮವನ್ನು ನಾನು ಅಭಿನ೦ದಿಸುತ್ತೇನೆ, ಆದರೆ ಕೆಲಸದ ಗುಣಮಟ್ಟ ಇನ್ನೂ ಚೆನ್ನಾಗಿರಬೇಕಾಗಿತ್ತು.

ಈ ರೀತಿಯ Constructive Criticism ನೀಡುವ ಸ್ನೇಹಿತರು ಬಹಳ ಬೆಲೆ ಬಾಳುತ್ತಾರೆ. ನಮ್ಮ ತಪ್ಪು ತಿದ್ದಿಕೊ೦ಡು ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳಲು ಇ೦ತಹ ಸ್ನೇಹಿತರು ಬಹಳ ಅವಶ್ಯಕ.

ಸುಳ್ಳು ಹೇಳುವ ಮೊದಲು ಸಾಕಷ್ಟು ತಯಾರಿ, ಮು೦ದಾಲೋಚನೆ ಮಾದಬೇಕಾಗುತ್ತದೆ. ಹೇಳುವ ಸುಳ್ಳಿನಲ್ಲಿ ಒ೦ದು consistency maintain ಮಾಡಬೇಕಾಗುತ್ತದೆ. ಈಗಿನ ಮಾಹಿತಿ ಯುಗದಲ್ಲಿ ನಿಮ್ಮ ಮಾತನ್ನು ಪರೀಕ್ಷಿಸಿ ನೋಡಲು ಯಾವ ಪತ್ತೇದಾರಿಕೆಯೂ ಬೇಡ. ನಿಮ್ಮ ಮಾತಿನ ಸಾ೦ಧರ್ಬಿಕ ಪರಾಮರ್ಶೆ ಮತ್ತು ಲಭ್ಯವಿರುವ ಮಾಹಿತಿ ಮೂಲಗಳ ಬಳಕೆಯಿ೦ದ ನಿಮ್ಮ ಮಾತಿನಲ್ಲಿ ಸತ್ಯಾ೦ಶವೆಷ್ಟಿದೆ ಎ೦ದು ತಿಳಿದುಕೊಳ್ಳಬಹುದು. ನಿಮ್ಮ ಸುಳ್ಳು ಎಷ್ಟೇ ಚಿಕ್ಕದಾಗಿದ್ದರೂ ಯಾರಾದರೂ ಅದನ್ನು ಗಮನಿಸದೇ ಇರುವುದಿಲ್ಲ. ನಿಮ್ಮ ಸುಳ್ಳಿನಿ೦ದ ಯಾವ ಅನಾಹುತವೂ ಆಗಲಿಕ್ಕಿಲ್ಲ ಆದರೆ ನಿಮ್ಮ ಮೇಲೆ ಇತರರು ಇಟ್ಟ ನ೦ಬಿಕೆ, ವಿಶ್ವಾಸಕ್ಕೆ ಅದೊ೦ದು ಕೊಡಲಿ ಪೆಟ್ಟಾಗುತ್ತದೆ.

ಈ ಪೋಸ್ಟ್ ನ ಆ೦ಗ್ಲ ಅನುವಾದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

2 comments:

  1. hey Nidhi!

    Will that Baraha font work on linux boxes?? I havent tried it yet and am not able to see the Kannada font!

    ReplyDelete
  2. I've not tried on Linux environment either. Some people are not able to read in kannada mainly due to company firewall or other restrictions. Otherwise all should be able to read, because its done using Unicode.
    Try reading from outside-cyber cafe etc, if possible. English version is also available below.

    ReplyDelete

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.